ಗರಿಕೆಯ ಉಪಯೋಗಗಳನ್ನು ತಿಳಿಯೋಣ ಬನ್ನಿ
ಗರಿಕೆ - Cynodon dactylon - Graminae ಕುಟುಂಬಕ್ಕೆ ಸೇರಿದ ಹುಲ್ಲು.
ನಾವು ಎಲ್ಲೆಲ್ಲೂ ಕಾಣಬಹುದಾದ ಹುಲ್ಲಿನ ಜಾತಿಗೆ ಸೇರಿದ ಸಸ್ಯ ಈ ಗರಿಕೆ. ಆದರೆ ನಮ್ಮಲ್ಲಿ ಬೇರೆ ಹುಲ್ಲುಗಳಿಗಿಂತ ವಿಭಿನ್ನವಾಗಿ ಹಾಗೂ ನಾವು ಗೌರವಯುತವಾಗಿ ಕಾಣುವ ಹುಲ್ಲು ಇದು, ಕಾರಣ ನಮ್ಮ ಹಿಂದುಗಳಲ್ಲಿ ಗಣೇಶನ ಪೂಜೆಗೆ ಅತೀ ಅವಶ್ಯ ಈ ಗರಿಕೆ.
ಗರಿಕೆಗೆ ಇರುವ ಪೂಜ್ಯ ಭಾವನೆಗೆ ಕಾರಣ, ಗರಿಕೆಯ ತುದಿಯ ಮೂರು ಎಲೆಗಳು, ಶಿವ, ಶಕ್ತಿ ( ಪಾರ್ವತಿ ) ಹಾಗೂ ಗಣೇಶನ ಪ್ರತೀಕ. ಹಾಗಾಗಿ ಪೂಜೆಗೆ ಶ್ರೇಷ್ಠ. ಒಂದು ಪುರಾಣದ ಕತೆ ಹೀಗಿದೆ :-
ಹಿಂದೊಮ್ಮೆ " ಅನಲಾಸುರ " ಎಂಬ ಒಬ್ಬ ರಾಕ್ಷಸ ಇದ್ದನಂತೆ ಆತ ತನ್ನ ಕಣ್ಣುಗಳ ದೃಷ್ಟಿಯಿಂದಲೇ ಇತರರನ್ನು ಸಾಯಿಸುತ್ತಿದ್ದ. ಯಾವ ದೇವತೆಗಳಿಂದಲೂ ಅವನನ್ನು ಕೊಲ್ಲಲು ಆಗದಿದ್ದಾಗ ಗಣೇಶ ಅವನನ್ನು ನುಂಗಿಬಿಟ್ಟ. ಆದರೆ ನಂತರ ಗಣೇಶನಿಗೆ ಹೊಟ್ಟೆಯಲ್ಲಿ ಉರಿ ಜಾಸ್ತಿಯಾಗಿ ತಡೆಯಲಾರದೆ ಹೋದಾಗ ತಾಯಿ ಪಾರ್ವತಿ 21 ಗರಿಕೆ ತಂದು ಅದರ ಕಷಾಯ ಮಾಡಿ ಕುಡಿಸಿದಾಗ ಹೊಟ್ಟೆ ಉರಿ ಉಪಶಮನ ಆಯಿತಂತೆ. ಅಂದಿನಿಂದ ಗಣೇಶನಿಗೆ 21 ಗರಿಕೆಯ ಅರ್ಪಣೆ ಶ್ರೇಷ್ಠ. ( ಬೇರೆ ಕತೆಗಳೂ ಇವೆ )
ಇನ್ನು ಗರಿಕೆಯ ಔಷಧೀಯ ಗುಣಗಳ ಬಗ್ಗೆ ಹೇಳುವುದಾದರೆ ಅದರ ಸ್ಥಾನ ತುಳಸಿಯ ನಂತರದ್ದು, ಬಹುಪಯೋಗಿ.
ತುದಿಯ ಎಳೆ ಚಿಗುರು ಗರಿಕೆಯನ್ನು ಆರಿಸಿ, ಬಿಡಿಸಿ, ಚೆನ್ನಾಗಿ ತೊಳೆದು ತೆಗೆದ ರಸ ( juice ) ಸಕಲ ರೋಗ ಪರಿಹಾರಕ. ಆದರೆ ಹೂವು ಬಿಟ್ಟ ಗರಿಕೆ ತನ್ನ ಔಷಧೀಯ ಗುಣ ಕಳೆದುಕೊಳ್ಳುವುದರಿಂದ, ಚಿಗುರು ಗರಿಕೆಯೇ ಔಷಧಕ್ಕೆ ಆಗಬೇಕು.
ಉತ್ತಮವಾದ ಎಳೇ ಗರಿಕೆಯನ್ನು ಸಾಧ್ಯವಾದಷ್ಟು ಮುಂಜಾನೆ, ಸೂರ್ಯನ ಕಿರಣಗಳು ಬೀಳುವ ಮೊದಲು, ಜನರು ಓಡಾಡದ ಜಾಗದಿಂದ ಕಿತ್ತು ತನ್ನಿ. ಅದನ್ನು ಚೆನ್ನಾಗಿ ತೊಳೆದು, ಸಣ್ಣಗೆ ಹೆಚ್ಚಿ ಅಥವಾ ಹಾಗೆ ಎರಡು ಲೋಟ ನೀರಿನಲ್ಲಿ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ ಒಂದು ಲೋಟ ಅಳತೆಗೆ ಇಂಗಿಸಿ. ಬೇಕಾದರೆ ನಾಲ್ಕಾರು ಕಾಳು ಮೆಣಸು, ಅರ್ಧ ಚಮಚ ಜೀರಿಗೆ ಹಾಗೂ ಚಿಟಿಕೆ ಉಪ್ಪು ಸೇರಿಸಿ ಕುದಿಸಿಕೊಂಡು ಆರಿಸಿಕೊಳ್ಳಿ. ಅಥವಾ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡು, ಶುಭ್ರವಾದ ಬಿಳಿ ಹತ್ತಿ ಬಟ್ಟೆಯಲ್ಲಿ ಚೆನ್ನಾಗಿ ಸೋದಿಸಿಕೊಂಡರೂ ಪರವಾಗಿಲ್ಲ. ಸಿಹಿ ಬೇಕಿದ್ದರೆ ಸ್ವಲ್ಪ ಜೇನುತುಪ್ಪ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ನಂತರ 2 - 3 ಘಂಟೆ ಕಾಫಿ, ಟೀ ಸಮೇತ ಯಾವ ಆಹಾರ ಸೇವನೆ ಬೇಡ.
ಗರಿಕೆಯಲ್ಲಿ 65 ಶೇಕಡ Chlorophyll ಇದೆ, ಹಾಗಾಗಿ ಕೆಂಪು ರಕ್ತ ಕಣಗಳು ಹೆಚ್ಚುತ್ತವೆ.
ಗರಿಕೆಯ ರಸ ನಿತ್ಯ ಸೇವನೆ, ಎಲ್ಲಾ ತರಹದ ಪಿತ್ತ ಕೋಶದ ( liver ) ತೊಂದರೆ ನಿವಾರಿಸುತ್ತದೆ. ಹಾಗೆ ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇರಿಸುತ್ತೆ. ಅಧಿಕ ರಕ್ತದೊತ್ತಡ ತಡೆಯುತ್ತದೆ.
ಗರಿಕೆಯಲ್ಲಿ ಶೇಕಡ 48 ಭಾಗ Protein ಇದೆ. ಅಲ್ಲದೆ 28 % ನಾರು, 12 % ಖನಿಜಾಂಶ ಇದೆ.
ಗರಿಕೆ ರಸ + ನಿಂಬೆ ರಸ + ಜೇನು ತುಪ್ಪ, ತಲಾ ಒಂದು ಅಳತೆ ಬೆರೆಸಿ ಸೇವಿಸುವುದರಿಂದ ಸುಸ್ತು, ಸಂಕಟ, ನಿಶ್ಯಕ್ತಿ, ರಕ್ತಹೀನತೆ ( anemic ) ನಿವಾರಣೆ ಆಗುವುದು.
ಗರಿಕೆ ರಸ + ಅಮೃತ ಬಳ್ಳಿ ರಸ + ಹಸುವಿನ ಹಾಲು ಸೇರಿಸಿ, ಕೊಬ್ಬರಿ ಎಣ್ಣೆಯಲ್ಲಿ ಸ್ವಲ್ಪ ಬಿಸಿಮಾಡಿ ಎಳೆಯ ಮಕ್ಕಳಿಗೆ ಸ್ನಾನಕ್ಕೂ ಮೊದಲು ಮಸಾಜ್ ಮಾಡಿದರೆ ಯಾವ ಚರ್ಮದ ತೊಂದರೆಗಳು ಬರದೆ, ಚರ್ಮ ಕಾಂತಿಯುತ ಆಗುತ್ತೆ.
ಮಕ್ಕಳ ಜ್ವರಕ್ಕೆ, ಗರಿಕೆಯ ರಸವನ್ನು ಜೇಷ್ಠಮಧು ಚೂರ್ಣದ ಕಷಾಯದ ಜೊತೆ ಬೆರಸಿ ಕುಡಿಸಬೇಕು.
ಒಂದು ಚಮಚ ಗರಿಕೆ ರಸ ಹಾಗೂ ಒಂದು ಚಮಚ ನಿಂಬೆರಸ, ನೀರು ಮಜ್ಜಿಗೆಯ ಜೊತೆ ಸೇವಿಸಿದರೆ ಮಲಬದ್ಧತೆ ನಿವಾರಣೆ ಆಗುತ್ತೆ. ಮೂಲವ್ಯಾದಿಗೆ ಪರಿಹಾರ. ರಕ್ತ ಹೋಗುವುದು ನಿಲ್ಲುತ್ತೆ.
ಗರಿಕೆಯನ್ನು ಅರೆದು paste ಮಾಡಿಕೊಂಡು, ಕೊಬ್ಬರಿ ಎಣ್ಣೆ ಹಾಗೂ ಅರಿಶಿನ ಪುಡಿ ಜೊತೆ ಬೆರಸಿ, ಸುಟ್ಟ ಗಾಯಗಳು, ಕುರ, ಕಜ್ಜಿ, ಅಲ್ಲದೆ ಇತರ ಯಾವುದೇ ಚರ್ಮದ ಖಾಯಿಲೆಗೆ ಲೇಪಿಸಿದರೆ, ತೊಂದರೆ ನಿವಾರಣೆಯಾಗುತ್ತೆ.
ಆರೋಗ್ಯವಂತರೂ ಸಹ ವಾರಕೊಮ್ಮೆ ಗರಿಕೆಯ ರಸ ಸೇವನೆ ಮಾಡಿದಲ್ಲಿ ಮುಂದೆ ಯಾವುದೇ ತೊಂದರೆಗಳು ಬಾರದಂತೆ ತಡೆಯಬಹುದು. ಗರಿಕೆ ರಸ ಸೇವನೆಯಿಂದ ಹೊಟ್ಟೆಯಲ್ಲಿ ಶೇಕರಣೆಯಾಗುವ ಆಮ್ಲತೆ ( acidity ) ಹಾಗೂ ಇತರ ವಿಷಕಾರಿ ಅಂಶ ( toxins ) ಹೊರ ಹೋಗುವುದು ಹಾಗೂ ದೇಹ ಆರೋಗ್ಯವಂತವಾಗಿರುವುದು.
ಲೇಖನ :- ಮಂಜುನಾಥ್ ಪ್ರಸಾದ್